ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು
ಹಾಯಾದ ಅಡ್ಡಹಾದಿಯ ಹಿಡಿಯದಿರು
ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು
1...............
ಕೊಟ್ಟ ಕೆಲಸದ ಸೂಕ್ಷ್ಮತೆಯ ಆಳವನಳಿ
ಸಿಕ್ಕ ಹೊಣೆಯ ಮೇರೆತ್ತರವನೇರು
ನಡುತರೆಯ ಕೆಸರಿನಲಿ ಮುಳುಗಾಡದಿರು
ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು
2...............
ನಿನ್ನನುಭವಗಳ ಬೇರು ಮುನ್ನುಗ್ಗಿ ಹರಡಲಿ
ನಿನ್ನರಿವಿನರೆಂಬೆಗಳ್ ಹಿಗ್ಗಿ ಚಾಚಲಿ
ಸುಖಾಲಸ್ಯದ್ ಹೊಂಡದಲಿ ಮಂಡೂಕವಾಗದಿರು
ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು
3.................
ಎಡಗಡೆಯ ನೋಟವನು ಕಡೆಗಣಿಸದಿರು
ಬಲಬದಿಯ ಅಭಿಮತವ ಎಸೆದಾಡದಿರು
ಅಸಹನೆಯ ಕತ್ತಲೊಳು ಜಡವಾಗದಿರು
ಕರ್ಮಯೋಗಿಯಾಗು, ಕರ್ಮಯೋಗಿಯಾಗು, ಕರ್ಮಯೋಗಿಯಾಗು
ಇದ್ದಲ್ಲಿರದಿರಯ್ಯ ಇದ್ದಲ್ಲಿರದಿರು