Thursday, January 14, 2021

ಅಮಾನುಷ ಗೀತೆ (The in-human song)

ಮನುಜ ಜನ್ಮ ದೊಡ್ಡದೆಂದು

ಯಾರು ಹೇಳಬಲ್ಲರು?

ಶಿವನೇ ಇಡದ ಭೇದಭಾವ

ಯಾರು ಮಾಡಬಲ್ಲರು?

 

೧ 

ಸೃಷ್ಟಿಯಿಂದ ಬೇರೆ ಕಂಡು

ಸೃಷ್ಟಿಯಿಂದ ಮೇಲೆ ಕಂಡೂ

ಇರುವ ಮನೆಯ ಕಡಿಸಿ ಕೆಡವಿ

ಯಾರು ಕೆಡಿಸಬಲ್ಲರು?

ಮನುಜ ಜನ್ಮ ದೊಡ್ಡದೆಂದು...

೨ 

ಕತ್ತೆ! ನಾಯಿ! ಹಾವು! ಕೋತಿ!

ಹಂದಿ! ತಿಗಣೆ! ಗೆದ್ದಲು!

ಒಡಹುಟ್ಟಿದವರ್ ಹೆಸರ ಕೊಂದು

ತಾಯ್ಮಡಿಲ ತೆಗಳಬಲ್ಲರು!

ಮನುಜ ಜನ್ಮ ದೊಡ್ಡದೆಂದು...

 ೩

ಮನುಜನೆಂಬೀ ರೋಗದಿಂದ

ಮುಕುತಿ ಸಿಕ್ಕರೇ ಶಿವ

ಭೂತಾಯಿಯ ಕೂಸುಗಳ್ ತಾವ್

ಸುಖದಿಂದಿರ ಬಲ್ಲರು!

 

ಮನುಜ ಜನ್ಮ ದೊಡ್ಡದೆಂದು...

ಮನುಜ ಹೇಳಬಲ್ಲನು!

ಶಿವನೇ ಇಡದ ಭೇದಭಾವ

ಮನುಜ ಮಾಡಬಲ್ಲನು!

Sunday, April 19, 2020

ಉಗಾಭೋಗ

ವೇಣುವಿನಲಿ
ನಾದ ಸುಗಂಧ ತುಂಬಿ ತುಳುಕುತಿರಲು...
ಬೆರಳಾಟದಿಂದನು
ಪ್ರಚೋದಿಸುವನೋರ್ವ ಬೇಕಿದ್ದ

ರಾಧಿಕೆಯ ಮನಸಿನಂಗಳದಲಿ
ಒಲವಿನಾರು ರಸಗಳಿರಲು
ಕಣ್ಮಿಡಿತದಿಂದ
ರಸದೌತಣವನೀವನೋರ್ವ ಬೇಕಿದ್ದ

ಪಾರ್ಥನಲಿ
ಛಲೋರುವಲು ಅಣಿಯಾಗಿರಲು
ನುಡಿಯಾಟದಿಂದಕೆ
ಕಿಡಿಯನಿಡುವನೋರ್ವ ಬೇಕಿದ್ದ

ಮನುಜರಲಿ
ಅರಿವಿನೇಳು ಸ್ವರಗಳಿರಲು
ಗೀತಮಾಲೆಯ ಪೋಣಿಸಿ
ಕರ್ಮಯೋಗಿಗಳಾಗಿಸುವನೋರ್ವ ಬೇಕಿದ್ದ

Saturday, April 11, 2020

ಕೈಲಾಸ ಯಾತ್ರೆಯ ಮಾಡಿದೆ ಎಂದು ಏಕೆ ನೀನು ಮೆರೆವೆ?

ಕೈಲಾಸ ಯಾತ್ರೆಯ ಮಾಡಿದೆ ಎಂದು ಏಕೆ ನೀನು ಮೆರೆವೆ
ಮೆರೆಯುವುದನ್ನ ಬಿಟ್ಟರೆ ನೀನು ಆ ಕೈಲಾಸವ ಸೇರುವೆ

ತಿಮ್ಮಪ್ಪನಿಗೆ ಕೋಟಿ ದಾನ ಮಾಡಿದೆಯೆಂದು ಏಕೆ ಸೊಕ್ಕು
ಕೋಟಿ ಜನರಿಗೆ ಅನ್ನದಾನ  ಮಾಡಿ ನೀನು ವೈಕುಂಠ ಹೊಕ್ಕು
ಕೈಲಾಸ ಯಾತ್ರೆಯ...

ಹತ್ತಾರು ಜನರನು ಕೊಂದು ನೀನು ಆಗಬೇಕೆನ್ನುವೆ ಹುತಾತ್ಮ
ಕರ್ಮಯೋಗಿಯಾಗಿ ನೀನು ಕಾಯಕದಿಂದಾಗು ಪರಮಾತ್ಮ
ಕೈಲಾಸ ಯಾತ್ರೆಯ...

Wednesday, March 25, 2020

ಜಯ ಜಯ ರಾಮಕೃಷ್ಣಾಯ - ಶ್ರೀ ರಾಮಕೃಷ್ಣ ಪರಮಹಂಸರ ಕುರಿತ ಭಜನೆ

ಜಯ ಜಯಾ ರಾಮಕೃಷ್ಣಾಯ
ಜಯ ಜ್ಞಾನಸುಧ ಪ್ರದಾಯ
ಅಜ್ಞಾನಂಧಕಾರ ಹರಾಯ
ಜಯ ಹೇ ಪರಮಹಂಸ

ಗದಾಧರ ನಾಮಾಂಕಿತ
ಕಾಳಿಕಾ ವರಬಲಾನ್ವಿತ
ವಿವೇಕಾನಂದ ಪರಿಪಾಲಿತ
ಶಾರ‍ದಾಮಾತ ಗುರುಕೃತ

ಅದ್ವೈತಾಮೃತ ಶಿಖಾಮಣಿ
ಗೃಹಸ್ಥಾವಧೂತ ಶಿರ‍ೋಮಣಿ
ಸಾಧು ಸಜ್ಜನ ಮನೋನ್ಮಣಿ
ಕರ್ಮಯೋಗಿ ಜನ ಕಣ್ಮಣಿ

Wednesday, December 4, 2019

ಏಕೀ ಆಲಸ್ಯವು ಆತನಿಗೆ ದೇವಿ

ಏಕೀ ಆಲಸ್ಯವು ಆತನಿಗೆ ದೇವಿ
ಭಕುತರೇ ಮೇಲೇರಿ ಮುಂದೆ ಹೋಗುತಿಹರು

ಕಣ್ತೆರೆದು ನೋಡೆನ್ನು ಪಾಲಾಕ್ಷನಿಗೆ ಗೌರಿ
ಬೇಡ ತನ್ನ್ ಎರಡೂ ಕಂಗಳನು ನೀಡಿಹನು
ಎಕೀ ಆಲಸ್ಯವು...

ಬೆರಳೆತ್ತಿದ ಗಿರಿಧಾರಿಗೆ ಹೇಳಮ್ಮ ಲಕುಮಿ
ತಂದೆ ವಸುದೇವನ ತೋಳ್ಬಲವ ಗಮನಿಸಲು
ಎಕೀ ಆಲಸ್ಯವು...


ಗೀತೆಯೊಂದನು ಸಾರಿ ಮೆರೆವಾತ ಕೇಶವಗೆ
ನೂರಾರು ಗೀತೆಗಳನು ರಚಿಸಿಹರು ದಾಸರು
ಎಕೀ ಆಲಸ್ಯವು...


ಏನದು ಅಭಯ ಹಸ್ತ ತೋರುವಾತ ನಮಗೆ
ಇಗೋ ಉಭಯಹಸ್ತದಿಂ ಕರ್ಮಯೋಗಿ ನಮಿಸುವನು
ಎಕೀ ಆಲಸ್ಯವು...

Wednesday, August 28, 2019

ಕೋಟೆ ಮಾರಮ್ಮ ಪಾಲಯಮಾಂ - ಜಂಬೂರು ಕೋಟೆ ಮಾರಮ್ಮನಿಗೆ ಗೀತಾರ್ಪಣೆ


ಶ್ರೀ ಕೋಟೆ ಮಾರಾಮ್ಮ ಪಾಲಯಮಾಂ
ತ್ರಿಮಾತೃಕ ಸಹೋದರಿ... ಅಮ್ಮಾ...
ಶ್ರೀ ಕೋಟೆ ಮಾರಮ್ಮ ಪಾಲಯಮಾಂ

ಗಂಗಮತಸ್ತ ಆರಾಧ್ಯ ದೇವತೆ (೨)
ಚತುರ್ವರ್ಣಾಲಂಕೃತೆ... ಶೀತಲೇ...

ಸರೋವರತಟಾಕ ವಾಸಿನಿ (ಅಮ್ಮ) (೨)
ಸುವರ್ಷ ಸಂಪತ್ತ್ ಪ್ರದಾಯಿನಿ... ಸುನಯನೀ...

ಚಂಪಕ ಪುಷ್ಪ ಸುಪೂಜಿತೆ (೨)
ಜಂಬೂರು ಗ್ರಾಮಸ್ಥಿತೆ...
ಕರ್ಮಯೋಗಿ ಸುಪ್ರೀತೇ
ಸದಾ ನಮಸ್ತೆ....

ಪಾಪಿಗಳ ಸೌಭಾಗ್ಯ - ಹರಿಭಜನೆ



ಏನು ಹಾಡಲಿ ಪಾಪಿಗಳ ಸೌಭಾಗ್ಯ, ಪುಣ್ಯವಂತರಿಗಿಂತ ಪಾಪಿಯಾಗುವುದೇ ಲೇಸು (೨)

ಪುಣ್ಯವಂತನಾದ ಸುಧಾಮನು ನಿನ್ನ್ ಮನೆಗೆ ನಡೆದು ಬಂದನು (೨)
ನೀ ಲಂಕೆಯವರೆಗೆ ನಡೆದು ಹೋದ ರಾವಣನ ಸೌಭಾಗ್ಯ ಏನು ಹೇಳಲಿ?

ಪುಣ್ಯವಂತಳಾದ ಯಶೋಧೆಯು ನಿನ್ನನ್ನು ಮಡಿಲಲ್ಲಿ ಮುದ್ದಾಡಿದಳು (೨)
ನೀನೆ ಎತ್ತಿ ಮಡಿಲಲ್ಲಿ ಮಲಗಿಸಿಕೊಂಡ ಹಿರಣ್ಯನ ಸೌಭಾಗ್ಯ ಏನು ಹೇಳಲಿ?

ಪುಣ್ಯವಂತನಾದ ಪಾರ್ಥನು ವಿಶ್ವರೂಪವನ್ನು ರಣರಂಗದಲಿ ಕಂಡ (೨)
ಸಭೆಯೊಳಗೇ ಅದನು ಕಂಡ ಕೌರವೇಶ್ವರನ ಸೌಭಾಗ್ಯ ಏನು ಹೇಳಲಿ?

(೪)
ಪುಣ್ಯವಂತರಾದ ಭಕ್ತರಿಗೆ ಮೋಕ್ಷವನ್ ನೀ ಅನುಗ್ರಹಿಸುವೆ (೨)
ಕಾಯಕದಲಿ ಕೈಲಾಸ ಕಾಣುವ ಕರ್ಮಯೋಗಿಯ ಸೌಭಾಗ್ಯ ಏನು ಹೇಳಲಿ